ಕೂಸುಗಳ ದಂತಶಾಸ್ತ್ರ
  
ಮಕ್ಕಳ ಹಲ್ಲು ಮತ್ತು ವಸಡನ್ನು ಕುರಿತ ಅಧ್ಯಯನ ಮತ್ತು ಅವುಗಳಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯವಿಭಾಗ (ಪೆಡೋಡಾಂಟಿಕ್ಸ್), ಬಾಲ್ಯದಂತಶಾಸ್ತ್ರವೆಂದು ಸಹ ಕರೆಯುತ್ತಾರೆ. ಮಕ್ಕಳು ತಮ್ಮ ಹಲ್ಲುಗಳ ಬೆಳೆವಣಿಗೆಯ ವಿವಿಧ ಹಂತಗಳಲ್ಲಿ ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಪರಿಪೂರ್ಣತೆಯನ್ನು ಹೊಂದಿ, ದೃಢವಾದ ಮತ್ತು ಆರೋಗ್ಯದಿಂದ ಕೂಡಿದ ಶಾಶ್ವತ ಹಲ್ಲುಗಳನ್ನು ಪಡೆಯುವಂತೆ ಮಾಡುವುದು ಇದರ ಮುಖ್ಯ ಧ್ಯೇಯ. ಮಕ್ಕಳ ಹಲ್ಲು ಮತ್ತು ವಸಡಿಗೆÉ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲು ಅವರ ದೈಹಿಕ, ಮಾನಸಿಕ ಮತ್ತು ಹಲ್ಲುಗಳ ಬೆಳೆವಣಿಗೆಯ ಸಂಪೂರ್ಣ ತಿಳಿವಳಿಕೆ ಇರುವುದು ಆವಶ್ಯಕ. ಇದಕ್ಕಾಗಿ ಬಾಲ್ಯದಂತವೈದ್ಯರು ಆಗಿಂದಾಗ್ಗೆ ಮಕ್ಕಳನ್ನು ಪರೀಕ್ಷಿಸಿ ಅವರ ಬಗ್ಗೆ ತಂದೆತಾಯಿಯರನ್ನು ವಿಚಾರಿಸಿ ಸೂಕ್ತ ಮಾಹಿತಿ ನೀಡಬೇಕು. ಮಕ್ಕಳಲ್ಲಿ ಹಲ್ಲುಗಳ ಬೆಳೆವಣಿಗೆಯನ್ನು ನಾಲ್ಕು ಹಂತಗಳನ್ನಾಗಿ ವಿಂಗಡಿಸಬಹುದು.

1. ದಂತಪೂರ್ವ ಹಂತ (ಪ್ರೀಡೆಂಟಲ್ ಸ್ಟೇಜ್) : ಮಕ್ಕಳು ಹುಟ್ಟಿದಾಗ ಬಚ್ಚು ಬಾಯಿಯವಾಗಿರುತ್ತವೆ. ಹುಟ್ಟಿದಂದಿನಿಂದ ಆರು ತಿಂಗಳವರೆಗೆ ಹಲ್ಲುಗಳು ವಸಡಿನ(ಬೊಡು) ಒಳಗೆ ಇರುತ್ತವೆ. ಆದ್ದರಿಂದ ಈ ಸಮಯವನ್ನು ದಂತಪೂರ್ವ ಅಥವಾ ಹಲ್ಲುಹುಟ್ಟಿನ ಮುಂಚಿನ ಕಾಲವೆಂದು ಕರೆಯುವರು.

2. ಹಾಲು ಹಲ್ಲುಗಳ ಹಂತ (ಡೆಸಿಡುಯಸ್ ಡೆಂಟಿಷನ್ ಸ್ಟೇಜ್) : ಮಕ್ಕಳಿಗೆ ಆರು ತಿಂಗಳಾದಾಗ ಕೆಳ ದವಡೆಯ ಮೊದಲನೆಯ ಹಾಲು ಬಾಚಿ ಹಲ್ಲು (ಲೋವರ್ ಡೆಸಿಡುಯಸ್ ಫಸ್ಟ್ ಸೆಂಟ್ರಲ್ ಇನ್‍ಸಿಸರ್) ಹುಟ್ಟುತ್ತದೆÉ. ಎರಡೂವರೆ ವರ್ಷದೊಳಗೆ ಎಲ್ಲ ಹಾಲು ಹಲ್ಲುಗಳೂ (20) ಹುಟ್ಟಿರುತ್ತವೆ. ಆರನೆಯ ವರ್ಷದಲ್ಲಿ ಶಾಶ್ವತ ಮೊದಲನೆಯ ದವಡೆ ಹಲ್ಲುಗಳು (ಪರ್ಮನೆಂಟ್ ಫಸ್ಟ್ ಮೋಲಾರ್ಸ್) ಹುಟ್ಟುತ್ತವೆ. ಆರು ತಿಂಗಳಿಂದ ಆರು ವರ್ಷದ ವರೆಗಿನ ಕಾಲಕ್ಕೆ ಹಾಲು ಹಲ್ಲುಗಳ ಕಾಲ ಎಂದು ಹೆಸರು.

3. ಮಿಶ್ರಿತ ಹಲ್ಲುಗಳ ಹಂತ (ಮಿಕ್ಸೆಡ್ ಡೆಂಟಿಷನ್ ಸ್ಟೇಜ್) : ಶಾಶ್ವತ ಮೊದಲನೆಯ ದವಡೆ ಹಲ್ಲು ಹುಟ್ಟಿದಂದಿನಿಂದ ಎಲ್ಲ ಹಾಲು ಹಲ್ಲುಗಳೂ ಬೀಳುವವರೆಗಿನ ಕಾಲಕ್ಕೆ ಮಿಶ್ರಿತ ಹಲ್ಲುಗಳ ಕಾಲ ಎಂದೆನ್ನುವರು. ಇದು ಸಾಧಾರಣವಾಗಿ ಆರನೆಯ ವರ್ಷದಿಂದ ºನ್ನೆರಡು ವರ್ಷದ ವರೆಗಿನ ಕಾಲ. ಈ ಸಮಯದಲ್ಲಿ ಮಕ್ಕಳಲ್ಲಿ ಹಾಲು ಹಲ್ಲುಗಳು ಮತ್ತು ಶಾಶ್ವತ ಹಲ್ಲುಗಳು ಇರುತ್ತವೆ.

4. ಶಾಶ್ವತ ಹಲ್ಲುಗಳ ಹಂತ (ಪರ್ಮನೆಂಟ್ ಡೆಂಟಿಷನ್ ಸ್ಟೇಜ್) : ಎಲ್ಲ ಹಾಲು ಹಲ್ಲುಗಳು ಬಿದ್ದ ಅನಂತರ ಬಾಯಿಯಲ್ಲಿ ಶಾಶ್ವತ ಹಲ್ಲುಗಳು ಮಾತ್ರ ಉಳಿದಿರುತ್ತವೆ. ಸಾಮಾನ್ಯವಾಗಿ ಹನ್ನೆರಡು ವರ್ಷದೊಳಗೆ ಎಲ್ಲ ಹಾಲು ಹಲ್ಲುಗಳು ಒಂದೊಂದಾಗಿ ಬಿದ್ದು ಹೋಗುತ್ತವೆ. ಆದ್ದರಿಂದ ಹನ್ನೆರಡು ವರ್ಷದ ಮೇಲ್ಪಟ್ಟ ಕಾಲಕ್ಕೆ ಶಾಶ್ವತ ಹಲ್ಲುಗಳ ಕಾಲ ಎಂದು ಕರೆಯುವರು.
ಮೇಲೆ ನಮೂದಿಸಿದ ಕಾಲಗಳಲ್ಲಿ ಗಮನಾರ್ಹ ಬದಲಾವಣೆಗಳು ಮಕ್ಕಳಲ್ಲಿ ಕಂಡು ಬರುತ್ತವೆ. ಪ್ರತಿಯೊಂದು ಕಾಲದ ಗುಣ ವ್ಯತ್ಯಾಸಗಳು ಇನ್ನೊಂದು ಕಾಲದೊಡನೆ ಬೆರೆಯುವ ಸಾಧ್ಯತೆ ಇದೆ. ಆದರೂ ಪ್ರತಿಯೊಂದರಲ್ಲೂ ಸಾಕಷ್ಟು ವಿಶಿಷ್ಟತೆ ಇರುವುದರಿಂದ ಇವನ್ನು ವಿಂಗಡಿಸಲು ಇತರ ವಿಧಾನಗಳನ್ನು ಅನುಸರಿಸಬೇಕಾಗುತ್ತದೆ. ಆದ್ದರಿಂದ ಪ್ರತಿಯೊಂದು ಕಾಲದಲ್ಲಿ ಮಕ್ಕಳಿಗೆ ಅಥವಾ ಸಂಬಂಧಪಟ್ಟ ಮಗುವಿಗೆ ಯಾವುದು ಸ್ವಾಭಾವಿಕವಾದುದೆಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ. ಹಾಗೆಯೇ ಮುಂದೆ ಒಂದು ಕಾಲದಲ್ಲಿ ಬೆಳೆವಣಿಗೆಯಲ್ಲಿ ಯಾವ ಬದಲಾವಣೆಯಾಗಬಹುದೆಂಬುದನ್ನೂ ನಿರ್ಧರಿಸಬೇಕಾಗುತ್ತದೆ. ಇದಕ್ಕೆ ಪ್ರತಿಯೊಂದು ಮಗುವಿನ ಬೆಳೆವಣಿಗೆಯನ್ನು ಆರೋಗ್ಯವಂತ ಮಕ್ಕಳ ಬೆಳೆವಣಿಗೆಯೊಡನೆ ಹೋಲಿಸಿ ನೋಡಬೇಕಾಗುವುದು. ನಿರ್ದಿಷ್ಟ ಕಾಲಗಳಲ್ಲಿ ಮಕ್ಕಳ ಬೆಳೆವಣಿಗೆಯ ವೇಗ ಮತ್ತು ಪ್ರಗತಿಗಳಲ್ಲುಂಟಾಗುವ ಬದಲಾವಣೆಗಳು ಅಧ್ಯಯನಕ್ಕೆ ಹೆಚ್ಚು ಸಹಕಾರಿಯಾಗುತ್ತವೆ. ಇವನ್ನು ಬರಿದೇ ರುಗ್ಣಾಲಯದ (ಕ್ಲಿನಿಕಲ್) ಪರೀಕ್ಷೆಯಿಂದ ಹೇಳಲು ಬರುವುದಿಲ್ಲ. ಆದ್ದರಿಂದ ವೈದ್ಯರಿಗೆ ಮನಶ್ಯಾಸ್ತ್ರ, ಎಕ್ಸ್‍ಕಿರಣ ಪ್ರಯೋಗಾಲಯದ ಪರೀಕ್ಷೆಗಳ ಜ್ಞಾನವಿರಬೇಕು. ಇದರಿಂದ ರೋಗನಿದಾನವನ್ನು (ಡಯಗ್ನೋಸಿಸ್) ಮಾಡಿ ಉತ್ತಮ ಚಿಕಿತ್ಸೆಯನ್ನು ಮಾಡಬಹುದು.

ಹಲ್ಲು ಹುಟ್ಟುವಾಗಿನ ತೊಂದರೆಗಳು (ಟೀತಿಂಗ್ ಟ್ರಬಲ್ಸ್) : ಮಕ್ಕಳಲ್ಲಿ ಹಲ್ಲು ಹುಟ್ಟುವಾಗ ಜ್ವರ ಬರುವುದು, ಭೇದಿಯಾಗುವುದು  ಮುಂತಾದ ಕಾಯಿಲೆಗಳು ಬರುವುದೆಂದು ಜನರ ತಿಳಿವಳಿಕೆ. ಸಾಮಾನ್ಯರ ದೃಷ್ಟಿಯಿಂದ ಇದನ್ನು ಸರಿಯಾಗಿ ಹೇಳಲು ಬರುವುದಿಲ್ಲ. ಆದರೂ ವೈದ್ಯಕೀಯ ದೃಷ್ಟಿಯಿಂದ ಒಪ್ಪಿಕೊಳ್ಳಲಾಗದು. ಹಲ್ಲು ಹುಟ್ಟುವೆಡೆಗಳಲ್ಲಿ ವಸಡು ಊದಿಕೊಂಡು ಏಕಾಣು ಜೀವಿಗಳಿಂದ ತೊಂದರೆಯಾಗಬಹುದು. ಮಕ್ಕಳಲ್ಲಿ ಉರಿಕೆದರುವಿಕೆ, ಜೊಲ್ಲುಸುರಿಸುವುದು ಮತ್ತು ಹೆಚ್ಚಾಗಿ ಚೀಪುವುದು ಅಥವಾ ಸಿಕ್ಕ ಪದಾರ್ಥಗಳನ್ನು ಜಗಿಯುವುದು ಹಲ್ಲು ಹುಟ್ಟುವಾಗ ಕಂಡುಬರುವುದು. ಇದಕ್ಕೆ ಆ ಸ್ಥಳದಲ್ಲಿ ಉಂಟಾಗುವ ನೋವು ಕಾರಣ. ಆ ಸ್ಥಳದಲ್ಲಿನ ವಸಡನ್ನು ಅಮುಕಿ ಹಿಡಿಯುವುದರಿಂದ ಅಥವಾ ನೋವಿನ ಮಾತ್ರೆಗಳನ್ನು ಸೇವಿಸುವುದರಿಂದ ನೋವು ಕಡಿಮೆಯಾಗುತ್ತದೆ.

ಮಕ್ಕಳ ದಂತಾರೋಗ್ಯ : ಮಕ್ಕಳ ಹಲ್ಲುಗಳ ಆರೋಗ್ಯದ ಬಗ್ಗೆ ಮಕ್ಕಳು, ತಂದೆತಾಯಿಗಳು ಹಾಗೂ ಸಂಬಂಧಪಟ್ಟವರು ಜಾಗರೂಕರಾಗಿರುವಂತೆ ಮಾಡಿ, ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿಸುವುದು ಬಾಲ್ಯದಂತವೈದ್ಯರ ಹಾಗೂ ಶಾಲಾದಂತವೈದ್ಯರ ಕೆಲಸಗಳಲ್ಲೊಂದು. ಇವರು ಮಕ್ಕಳ ಹಲ್ಲುಗಳು ಮತ್ತು ವಸಡುಗಳು ಕಾಯಿಲೆಗೆ ಒಳಗಾಗದಂತೆ ಹಾಗೂ ಹಲ್ಲುಗಳು ವಕ್ರ ವಕ್ರವಾಗಿ ಬೆಳೆಯದಂತೆ ನೋಡಿಕೊಳ್ಳುವರು. ಅಲ್ಲದೆ ಹಲ್ಲುಗಳ ಪ್ರಾಮುಖ್ಯ ಎಷ್ಟೆಂಬುದನ್ನು ತೋರಿಸಿಕೊಡುವರು. ಮಕ್ಕಳ ಹಲ್ಲಿನ ಆರೋಗ್ಯ ರಕ್ಷಣೆಯನ್ನು ನಾಲ್ಕು ವಿಧಗಳಲ್ಲಿ ವಿವರಿಸಬಹುದು.

1. ದಂತರೋಗ ಪ್ರತಿಬಂಧಕ ಶಾಸ್ತ್ರ (ಪ್ರಿವೆಂಟಿವ್ ಡೆಂಟಿಸ್ಟ್ರಿ) : ಬಾಯಿಯನ್ನು ಶುಚಿಯಾಗಿಟ್ಟುಕೊಳ್ಳುವ ರೀತಿಗಳನ್ನು ಹೇಳಿಕೊಡುವುದು. ಅಲ್ಲದೆ ಹಲ್ಲುಗಳ ಮೇಲೆ ಫ್ಲೋರೈಡ್‍ಗಳನ್ನು ಆಗಿಂದಾಗ್ಗೆ ಹಚ್ಚುತ್ತಿರುವುದು, ಮಕ್ಕಳಿಗೆ ಸಮತೂಕದ ಆಹಾರವನ್ನು ಕೊಡುವುದು. ಸುಧಾರಿಸಿದ ಶರ್ಕರಪಿಷ್ಟಗಳನ್ನು (ರೀಫೈನ್ಡ್ ಕಾರ್ಬೊಹೈಡ್ರೇಟ್ಸ್) ತಿನ್ನುವುದನ್ನು ಕಡಿಮೆ ಮಾಡಿಸುವುದು ಅಥವಾ ಅವನ್ನು ಊಟ ಮಾಡುವಾಗ ಮಾತ್ರ ತಿನ್ನಲು  ಕೊಟ್ಟು ಊಟವಾದ ಬಳಿಕ ಬಾಯಿಯನ್ನು ಚೆನ್ನಾಗಿ ತೊಳೆಯಲು ತಿಳಿಯಹೇಳುವುದು. ಅಲ್ಲದೆ ರೋಗಿಗಳಿಗೆ ಆರೋಗ್ಯದ ಬಗ್ಗೆ ಜಾಗರೂಕತೆಯಿಂದಿರುವಂತೆ ಮಾಡುವುದು-ಈ ರೀತಿಯ ಉಪಾಯಗಳಿಂದ ಹಲ್ಲು ಮತ್ತು ವಸಡುಗಳಿಗೆ ಬರುವ ರೋಗಗಳನ್ನು ತಡೆಗಟ್ಟಬಹುದು. ಅವನ್ನು ಕುರಿತ ಅಧ್ಯಯನಕ್ಕೆ ದಂತರೋಗಪ್ರತಿಬಂಧಕಶಾಸ್ತ್ರ ಎಂದೆನ್ನುವರು.

2. ಬಾಲ್ಯದಂತಶಾಸ್ತ್ರ (ಪಿಡೊಡಾನ್ಯಿಯ); ಇದರಲ್ಲಿ ವೈದ್ಯರಾದವರು ಮಕ್ಕಳ ಮನಸ್ಸನ್ನು ಅರಿತುಕೊಂಡು ಅವರೊಡನೆ ಬೆರೆಯುವರು. ಅವರ ಬೇಕು ಬೇಡಗಳನ್ನು ತಿಳಿದುಕೊಳ್ಳುವರು. ಅಲ್ಲದೆ ಮಕ್ಕಳ ಬೆಳೆವಣಿಗೆಯಲ್ಲುಂಟಾಗುವ ಹಲ್ಲಿನ ರೋಗಗಳನ್ನು ಪತ್ತೆ ಹಚ್ಚಿ ತತ್‍ಕ್ಷಣ ಚಿಕಿತ್ಸೆ ನೀಡುವರು.

3. ವಕ್ರದಂತಪ್ರತಿಬಂಧಕಶಾಸ್ತ್ರ (ಪ್ರಿವೆಂಟಿವ್ ಆರ್ಥೋಡಾಂಟಿಕ್ಸ್) : ಈ ವಿಭಾಗದವರು ಮಕ್ಕಳ ಹಲ್ಲುಗಳ, ದವಡೆಗಳ ಮತ್ತು ಮುಖದ ಬೆಳೆವಣಿಗೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ಅಭ್ಯಸಿಸುತ್ತಾರೆ. ಒಂದು ಕಾಲದಲ್ಲಿ ಸ್ವಾಭಾವಿಕವಾಗಿದ್ದು ಮುಂದೆ ಅದು ಹಲ್ಲುಗಳು ವಕ್ರವಕ್ರವಾಗಿ ಹುಟ್ಟುವಂತೆ ಮಾಡುವುದಿದ್ದರೆ ಅದನ್ನು ತಡೆಗಟ್ಟುವರು ಹಾಗೂ ಹಲ್ಲುಗಳು ವಕ್ರವಾಗಿ ಹುಟ್ಟುತ್ತಿರುವಲ್ಲಿ ಸರಿಯಾದ ಚಿಕಿತ್ಸೆ ನೀಡಿ ಮುಂದೆ ಹಲ್ಲುಗಳು ಮುತ್ತಿನ ಸಾಲುಗಳಂತೆ ಕಾಣುವಂತೆ ಪ್ರಯತ್ನ ಮಾಡುವರು.

4. ಜನಾರೋಗ್ಯ ದಂತಶಾಸ್ತ್ರ (ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ): ಇದಕ್ಕೆ ಸಂಬಂಧಪಟ್ಟ ವೈದ್ಯರು ಹಲ್ಲಿನ ಬೆಳೆವಣಿಗೆಗೆ ಮತ್ತು ಆರೋಗ್ಯಕ್ಕೆ ಬೇಕಾದ ಆವಶ್ಯಕತೆಗಳನ್ನು ಪೂರೈಸಲು ಏರ್ಪಾಡು ಮಾಡುವರು. ಹಾಗೂ ರೋಗಗಳನ್ನು ತಡೆಗಟ್ಟಲು ಯೋಜನೆಗಳನ್ನು ಕೈಗೊಳ್ಳುವರು. ಉದಾಹರಣೆಗೆ, ಕುಡಿಯುವ ನೀರಿಗೆ ಫ್ಲೋರೈಡುಗಳನ್ನು ಬೆರೆಸುವಂತೆ ವ್ಯವಸ್ಥೆ ಮಾಡುವರು. ಇದರಿಂದ ಹಲ್ಲು ಹುಳುಕಾಗುವುದಿಲ್ಲ. ಇನ್ನಿತರ ಕೆಲವು ಕಾರ್ಯಕ್ರಮಗಳನ್ನು ಹಾಕಿಕೊಂಡು ಹಲ್ಲುಗಳ ವಸಡುಗಳ ಮತ್ತು ಶರೀರದ ಆರೋಗ್ಯ ರಕ್ಷಣೆ ಬಗ್ಗೆ ಜನರಿಗೆ ತಿಳಿವಳಿಕೆ ನೀಡುವರು.                                            
(ಎ.ಆರ್.ಪಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ